ರೊಮೇಶ್ ಶಾಂತ ಕಲುವಿತರಣ (ಸಿಂಹಳ: රොමේෂ් ශාන්ත කලුවිතාරණ; ಹುಟ್ಟು: ೨೪ ನವೆಂಬರ್ ೧೯೬೯) ಮಾಜಿ ಶ್ರೀಲಂಕಾದ ಕ್ರಿಕೆಟಿಗ. ಇವರು ೧೯೯೦ ರಿಂದ ೨೦೦೪ ರವರೆಗೆ ೪೯ ಟೆಸ್ಟ್ ಮತ್ತು ೧೮೯ ಏಕದಿನ ಪಂದ್ಯಗಳಲ್ಲಿ ಆಡಿದ್ದಾರೆ. ೧೭ ಮೇ ೨೦೦೮ ರಂದು ಇವರನ್ನು ಮಲೇಷ್ಯಾದ ಹಂಗಾಮಿ ಕ್ರಿಕೆಟ್ ತರಬೇತುದಾರರಾಗಿ ನೇಮಿಸಲಾಯಿತು. ಇವರು ೧೯೯೬ ಕ್ರಿಕೆಟ್ ವಿಶ್ವಕಪ್ ವಿಜೇತ ತಂಡದ ಪ್ರಮುಖ ಸದಸ್ಯ ಮತ್ತು ವಿಕೆಟ್ ಕೀಪರ್ ಆಗಿದ್ದು, ಆಕ್ರಮಣಕಾರಿ ಬ್ಯಾಟಿಂಗ್ ಶೈಲಿಗೆ ಹೆಸರುವಾಸಿಯಾಗಿದ್ದರು. == ಅಂತಾರಾಷ್ಟ್ರೀಯ ವೃತ್ತಿಜೀವನ == ಅವರ ಆರಂಭಿಕ ವೃತ್ತಿಜೀವನದ ಒಳ್ಳೆಯ ಪ್ರದರ್ಶನದಿಂದಾಗಿ ಶ್ರೀಲಂಕಾ ತಂಡದ ಉತ್ತಮ ನಿರೀಕ್ಷೆಯಾಗಿ ಕಾಣುವಂತೆ ಮಾಡಿತು. ನಿಸ್ಸಂದೇಹವಾಗಿ ಅವರ ವೃತ್ತಿಯ ಪ್ರಮುಖ ಗಳಿಗೆಯೆಂದರೆ ೧೯೯೨ರಲ್ಲಿ ಪ್ರಬಲವಾದ ಆಸ್ಟ್ರೇಲಿಯಾ ತಂಡದ ವಿರುದ್ಧದ ಪಾದಾರ್ಪಣೆ ಟೆಸ್ಟ್ ಪಂದ್ಯದಲ್ಲಿ ೧೩೨ ನಾಟ್ ಔಟ್ ಇನ್ನಿಂಗ್ಸ್ (೨೬ ಬೌಂಡರಿಗಳನ್ನು ಒಳಗೊಂಡಂತೆ). ಆದಾಗ್ಯೂ ಕಳೆಗುಂದುತ್ತಿದ್ದ ಶ್ರೀಲಂಕಾದ ತಂಡದಲ್ಲಿ (೧೯೯೬ರ ವಿಶ್ವಕಪ್‌ನಲ್ಲಿ ಶ್ರೀಲಂಕಾ ಕ್ರಿಕೆಟ್‌ನ ಪುನರುಜ್ಜೀವನದ ಮುಂಚೆ) ಅವರ ಮೇಲಿದ್ದ ಭರವಸೆಯನ್ನು ಪೂರೈಸುವಲ್ಲಿ ವಿಫಲರಾದರು. ರಾಷ್ಟ್ರೀಯ ತಂಡದಲ್ಲಿದ್ದಾಗ ಕೆಟ್ಟ ಶಾಟ್ ಆಯ್ಕೆಯಿಂದಾಗಿ ಕೆಲವೊಮ್ಮೆ ತಮ್ಮ ವಿಕೆಟ್ ಒಪ್ಪಿಸುತ್ತಿದ್ದರು. ಸ್ವಿಂಗಿಂಗ್ ಎಸೆತ ಅವರ ದೌರ್ಬಲ್ಯವಾಗಿತ್ತು. ಆದರೂ ಅವರು ವೇಗದ ಎಸೆತಗಳನ್ನು ಎದುರಿಸಲು ಇಷ್ಟಪಡುತ್ತಿದ್ದರು. ಕೆಟ್ಟ ಎಸೆತಗಳನ್ನು ಬೇಗನೇ ದಂಡಿಸುತ್ತಿದ್ದರು. ೧೯೯೫-೯೬ರ ಆಸ್ಟ್ರೇಲಿಯಾ ಪ್ರವಾಸದಲ್ಲಿ ಸನತ್ ಜಯಸೂರ್ಯ ಅವರೊಂದಿಗೆ ಆರಂಭಿಕ ಬ್ಯಾಟ್ಸ್‌ಮನ್ ಆಗಲು ಬಡ್ತಿ ನೀಡಲಾಯಿತು. ಆಮೇಲೆ ಇದು ಏಕದಿನ ಪಂದ್ಯಗಳಲ್ಲಿ ಮೊದಲ ಹದಿನೈದು ಓವರ್‌ನಲ್ಲಿ ಕ್ಷೇತ್ರರಕ್ಷಣೆಯ ನಿರ್ಬಂಧಗಳು ಇದ್ದಾಗ, ಆಕ್ರಮಣಕಾರಿ ಬ್ಯಾಟಿಂಗ್‌ನ ಹೊಸ ತಂತ್ರ ರಚನೆ ಕಾರಣವಾಯಿತು. ಇದು ಕ್ರಿಕೆಟ್‌ಗೆ ಕಲುವಿತರಣ ಅವರ ಬಹುದೊಡ್ಡ ಕೊಡುಗೆ ಆಗಿದೆ. ಆರಂಭದಿಂದಲೇ ಆಕ್ರಮಣ ಮಾಡುವ ಈ ಹೊಸ ಕಾರ್ಯತಂತ್ರವು ಶ್ರೀಲಂಕಾಕ್ಕೆ ೧೯೯೬ರ ಕ್ರಿಕೆಟ್ ವಿಶ್ವಕಪ್ ಗೆಲ್ಲಲು ಮುಖ್ಯ ಕಾರಣವಾಯಿತು. ಏಕೆಂದರೆ ಬೇರ್ಯಾವ ತಂಡಗಳೂ ಇಂತಹ ದಾಳಿಗೆ ಸಿದ್ಧವಾಗಿರಲಿಲ್ಲ. ಅರ್ಜುನ ರಣತುಂಗ ನಾಯಕರಾಗಿದ್ದ ಆ ವಿಶ್ವಕಪ್ ಸರಣಿಯಲ್ಲಿ ಕಲುವಿತರಣ ಜಯಸೂರ್ಯ ಅವರೊಂದಿಗೆ ಓಪನರ್ ಮತ್ತು ವಿಕೆಟ್ ಕೀಪರ್ ಆಗಿದ್ದರು. == ಕ್ರಿಕೆಟ್ ಹೊರಗೆ == ಅವರು ಕಲೂಸ್ ಹೈಡವೆ ಎಂಬ ಯೋಜನೆಯನ್ನು ಆರಂಭಿಸಿದರು. ಇದು ಉದವಾಲವೆಯಲ್ಲಿ ಇರುವ ಐಷಾರಾಮಿ ಕಾಡಿನ ರೆಸಾರ್ಟ್ ಆಗಿದೆ. == ಉಲ್ಲೇಖಗಳು ==